ಸು. 1750. ಕೆಳದಿನೃಪವಿಜಯಂ ಎಂಬ ಗ್ರಂಥದ ಕರ್ತೃ. ಕೆಳದಿ ಸಂಸ್ಥಾನದ ಆಸ್ಥಾನಕವಿ. ಈತ ಕೆಳದೀವರಬಸವೇಂದಾ ಶ್ರಿತ ಎಂದು ಕೃತಿಯಲ್ಲಿ ಹೇಳಿಕೊಂಡಿರುವುದರಿಂದ ಎರಡನೆಯ ಬಸವಪ್ಪ ನಾಯಕನ ಕಾಲದಲ್ಲಿ (1739-54) ಇದ್ದಿರಬಹುದು. ಕೃತಿಯ ಆದಿಯಲ್ಲಿ ಪೀಠಿಕಾ ಪ್ರಕರಣ ಇಲ್ಲದಿರುವುದರಿಂದ ಕವಿಯ ವಿಚಾರ ತಿಳಿದುಬರುವುದಿ ಲ್ಲವಾದರೂ ಕಾವ್ಯದ ಒಂದು ಕಡತದ ಪ್ರತಿಯ ಕೊನೆಯಲ್ಲಿ ಮೆರೆವೀ ಸತ್ಕೃತಿಯಂ ತಾಂ ವಿರಚಿಸಿದಂ ಸಕಲನೃಪಶಿರೋಮಣಿ ಕೆಳದೀವರಬಸ ವೇಂದ್ರಾಶ್ರಿತ ಭೂಸುರಕುಲಮಣಿ ವೆಂಕಪಾತ್ಮಜಂ ಲಿಂಗಬುಧಂ ಎಂದು ಹೇಳಿದೆ. ಈತ ಶಿವಕಲ್ಯಾಣ ಎಂಬ ಯಕ್ಷಗಾನ ಕೃತಿಯನ್ನೂ ರಚಿಸಿರುವಂತಿದೆ.

ಕೆಳದಿನೃಪವಿಜಯ 12 ಆಶ್ವಾಸಗಳನ್ನುಳ್ಳ ಚಂಪೂ ಗ್ರಂಥ.  ಕೆಳದಿ ರಾಜರ ಚರಿತ್ರೆ ಈ ಗ್ರಂಥದ ವಸ್ತು. ಒಂದನೆಯ ಆಶ್ವಾಸದಲ್ಲಿ ಚೌಡಪ್ಪನಾ ಯಕ, ಎರಡನೆಯ ಆಶ್ವಾಸದಲ್ಲಿ ಸದಾಶಿವರಾಯನಾಯಕ, ಮೂರನೆಯ ಆಶ್ವಾಸದಲ್ಲಿ ದೊಡ್ಡಸಂಕಣ್ಣನಾಯಕ, ನಾಲ್ಕನೆಯ ಆಶ್ವಾಸದಲ್ಲಿ ಚಿಕ್ಕಸಂಕಣ್ಣನಾಯಕ, ಐದನೆಯ ಆಶ್ವಾಸದಲ್ಲಿ ರಾಮರಾಜನಾಯಕ, ಆರನೆಯ ಆಶ್ವಾಸದಲ್ಲಿ ವೀರಭದ್ರನಾಯಕ, ಏಳನೆಯ ಆಶ್ವಾಸದಲ್ಲಿ ಶಿವಪ್ಪನಾಯಕ ಮತ್ತು ವೆಂಕಟಪ್ಪ ನಾಯಕ, ಎಂಟನೆಯ ಆಶ್ವಾಸದಲ್ಲಿ ಭದ್ರಪ್ಪನಾಯಕ, ಹಿರಿಯ ಸೋಮಶೇಖರ ನಾಯಕ ಮತ್ತು ಕುತ್ಸಿತ ಶಿವಪ್ಪನಾಯಕ, ಒಂಬತ್ತನೆಯ ಆಶ್ವಾಸದಲ್ಲಿ ಚೆನ್ನಮ್ಮಾಜಿ, ಹತ್ತನೆಯ ಆಶ್ವಾಸದಲ್ಲಿ ಹಿರಿಯ ಬಸವಪ್ಪನಾಯಕ ಮತ್ತು ಸೋಮಶೇಖರ ನಾಯಕ, ಹನ್ನೊಂದನೆಯ ಆಶ್ವಾಸದಲ್ಲಿ ಬಸವಪ್ಪನಾಯಕ ಮತ್ತು ಚೆನ್ನಬಸವನಾಯಕ, ಹನ್ನೆರಡನೆಯ ಆಶ್ವಾಸದಲ್ಲಿ ವೀರಮ್ಮಾಜಿ ಮತ್ತು ಸೋಮಶೇಖರನಾಯಕ-ಈ ರಾಜರ ವಿಚಾರಗಳಿವೆ. ಈ ಗ್ರಂಥದಲ್ಲಿ ಕೆಳದಿ ಅರಸರ ಚರಿತ್ರೆಯ ನಿರೂಪಣೆ ಪ್ರಧಾನವಾದರೂ ಚಿತ್ರದುರ್ಗದ ನಾಯಕರು, ಬೇಲೂರು ಅರಸರು, ವಿಜಯನಗರದ ಅರಸರು, ಶಾಹೀರಾಜರು, ಮರಾಠರು, ದೆಹಲಿಯ ಸುಲ್ತಾನರು ಇವರ ವಿಷಯವೂ ಪ್ರಾಸಂಗಿಕವಾಗಿ ಉಕ್ತವಾಗಿದೆ.  ಚಂಪೂ ಸಂಪ್ರದಾಯವನ್ನು ಅನುಸರಿಸಿ ಗ್ರಂಥಾದಿಯಲ್ಲಿ ಸಮುದ್ರ, ಮೇರುಪರ್ವತ, ಜಂಬೂದ್ವೀಪ, ಕರ್ನಾಟಕ ದೇಶ ಮೊದಲಾದವನ್ನು ಕವಿ ವರ್ಣಿಸಿದ್ದಾನೆ. ಕೃತಿಯಲ್ಲಿ ಕಂದ ಮತ್ತು ಗದ್ಯ ಹೆಚ್ಚು. ವೃತ್ತಗಳಿರುವುದು ಕಡಮೆ. ಕಾವ್ಯಾಂಶಕ್ಕಿಂತ ಚಾರಿತ್ರ್ಯಾಂಶವೇ ಅಧಿಕ.

ಕೆಳದಿನೃಪವಿಜಯವನ್ನು ಸಂಪೂರ್ಣವಾಗಿ ಐತಿಹಾಸಿಕ ಆಧಾರಗ್ರಂಥ ವೆಂದು ಪರಿಗಣಿಸದಿದ್ದರೂ ಕೆಳದಿಯ ಇತಿಹಾಸಕ್ಕೆ ಸಂಬಂಧಪಟ್ಟ ವಿವರಣೆಗಳನ್ನು ಹೊಂದಿರುವುದರಿಂದ ಈ ಗ್ರಂಥ ಇತಿಹಾಸಕಾರರಿಗೆ ಕೆಳದಿ ಅರಸರ ಚರಿತ್ರೆಯನ್ನು ಬರೆಯುವಲ್ಲಿ ಅಮೂಲ್ಯ ಆಕರವಾಗಿದೆ.
	
	(ಕೆ.ಟಿ.ಆರ್.;ಎಸ್.ಎನ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ